ಕಥೆ-೬
ಉಪಾಯ
ನಾಲ್ಕೈದು ವರ್ಷಗಳಿಂದ ಬರಗಾಲ ಬಿದ್ದಿದ್ದರಿಂದ ನಮ್ಮೂರಿನಲ್ಲಿ ಜೀವನ ನಿರ್ವಹಣೆ ಕಷ್ಟ ಎಂದು ಅರಿತು ಶಂಕರಪ್ಪ ನಗರಕ್ಕೆ ದುಡಿಯಲು ಹೋಗಬೇಕೆಂದು ತೀರ್ಮಾನಿಸಿದ. ಇದರ ಬಗ್ಗೆ ಹೆಂಡತಿ ಮತ್ತು ಮಗಳೊಂದಿಗೆ ಒಂದು ದಿನ ಕುಳಿತು ಮಾತನಾಡಿದ. ಹೆಂಡತಿಯೊಂದಿಗೆ,”ನಮ್ಮ ಬಳಿ ಇರುವ ಐವತ್ತು ಸಾವಿರ ರೂಪಾಯಿಗಳಲ್ಲಿ ಮಗಳ ಮದುವೆ ಮಾಡುವುದು ಕಷ್ಟ. ಹಾಗಾಗಿ ನಾನು ಒಂದೆರಡು ವರ್ಷ ಕೆಲಸ ಮಾಡಿ ಮಗಳ ಮದುವೆಗೆ ಹಣ ಹೊಂದಿಸಿಕೊಂಡು ಬರಬೇಕೆಂದು ಹೊರಟಿದ್ದೇನೆ” ಎಂದ. ಮನೆಯಲ್ಲಿ ಒಂದು ಆಕಳು ಇದ್ದುದರಿಂದ ಅದರ ಹಾಲನ್ನು ಮಾರಿ ಬರುವ ಹಣದಿಂದ ಅವರಿಬ್ಬರ ಜೀವನ ನಿರ್ವಹಣೆ ನಡೆಯುತ್ತದೆ ಎಂಬುದನ್ನು ತಿಳಿದು ಹೊರಡಲು ಸಿದ್ಧನಾದ. ಮಗಳು ಜಾನಕಿಯನ್ನು ಬಡತನದ ಕಾರಣ ಹೆಚ್ಚು ಓದಿಸಲಾಗಿರಲಿಲ್ಲ. ಹೆಂಡತಿಗೂ ವ್ಯವಹಾರ ಜ್ಞಾನ ಅಷ್ಟಕ್ಕಷ್ಟೇ ಇತ್ತು.
ಶಂಕರಪ್ಪ ನಗರಕ್ಕೆ ದುಡಿಯಲು ಹೋಗುವ ಮೊದಲು ಮನೆಯಲ್ಲಿ ಕೂಡಿಟ್ಟಿದ್ದ ಐವತ್ತು ಸಾವಿರ ರೂಪಾಯಿ ಮನೆಯಲ್ಲಿ ಇರುವುದು ಸುರಕ್ಷಿತವಲ್ಲ ಎಂಬುದನ್ನು ಅರಿತು ಗೌಡರ ಮನೆಗೆ ಹೋಗಿ ಗೌಡರಿಗೆ ಆ ಹಣವನ್ನು ಇಟ್ಟುಕೊಳ್ಳುವಂತೆ ಮತ್ತು ತಾನು ಮರಳಿ ಊರಿಗೆ ಬಂದಮೇಲೆ ಪಡೆಯುವುದಾಗಿ ಹೇಳಿದ. ಗೌಡನು ಅಹಂಕಾರದಿಂದ “ಹಾ…ಹಾ ಸರಿ ಕೊಟ್ಟು ಹೋಗು” ಎಂದ. ಗೌಡನು ನಂಬಿಗಸ್ಥನೆಂದು ಶಂಕರಪ್ಪ ಯಾವುದೇ ದಾಖಲೆಗಳು ಇಲ್ಲದೆ ಅವನ ಬಳಿ ಹಣವನ್ನು ಕೊಟ್ಟ.
ಒಲ್ಲದ ಮನಸ್ಸಿನಿಂದ ಹೆಂಡತಿ ಮತ್ತು ಮಗಳು ಅವನನು ಬೀಳ್ಕೊಟ್ಟರು. ಶಂಕರಪ್ಪ ನಗರದತ್ತ ನಡೆದ. ಅಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸಕ್ಕೆ ಸೇರಿದ. ದಿನಗಳು ಕಳೆದವು. ಇತ್ತ ಹೆಂಡತಿ ಮತ್ತು ಮಗಳ ನೆನಪಾಗಲು ಶುರುವಾಯಿತು. ಅಲ್ಲಿಂದಲೇ ಅವರನ್ನು ನೆನೆಸಿ ಮತ್ತೆ ಕೆಲಸದಲ್ಲಿ ತೊಡಗಿದ. ಕಷ್ಟಗಳ ಮಧ್ಯ ಜಾನಕಿ ಮತ್ತು ಅವಳ ತಾಯಿ ಜೀವನ ಸಾಗಿಸುತ್ತಿದ್ದರು.
ಒಂದೆರಡು ವರ್ಷಗಳಲ್ಲಿ ಬರುತ್ತೇನೆಂದು ಹೇಳಿದ ಶಂಕರಪ್ಪ ಮೂರು ವರ್ಷಗಳಾದರು ಮರಳಿ ಬರಲಿಲ್ಲ. ನಾಲ್ಕನೇ ವರ್ಷಕ್ಕೆ ಹಿಂದಿರುಗಿದ. ಅವನನ್ನು ಕಂಡ ಹೆಂಡತಿ ಮತ್ತು ಮಗಳು ಭಾವುಕರಾದರು. ಆರೋಗ್ಯ ವಿಚಾರಿಸಿದರು. ಹಗಲು ರಾತ್ರಿ ಎನ್ನದೇ ದುಡಿದ ಶಂಕರಪ್ಪ ಅವರಿಬ್ಬರನ್ನು ಕಂಡು ತನ್ನೆಲ್ಲ ಕಷ್ಟ ಮತ್ತು ನೋವುಗಳನ್ನು ಮರೆತ. ಎಲ್ಲರೂ ಸೇರಿ ಊಟ ಮಾಡಿ ಆ ದಿನ ಮಲಗಿದರು. ಮಾರನೇ ದಿನ ಹೆಂಡತಿ,”ನೀವು ನಗರಕ್ಕೆ ಹೋಗುವಾಗ ಗೌಡರ ಮನೆಯಲ್ಲಿ ಐವತ್ತು ಸಾವಿರ ರೂಪಾಯಿ ಇಟ್ಟಿದ್ದನ್ನು ಮರೆತಿರುವಿರೋ ಹೇಗೆ?” ಎಂದು ಶಂಕರಪ್ಪ ಗೌಡರ ಮನೆಯಲ್ಲಿ ಹಣ ಕೊಟ್ಟಿದ್ದನ್ನು ನೆನಪಿಸಿದಳು. ನಾನು ಅಲ್ಲಿಗೆ ಹೋಗಬೇಕೆಂದೆ ಶರ್ಟು ಹುಡುಕುತ್ತಿರುವೆ ಎಂದ. ಅಷ್ಟರಲ್ಲಿ ಜಾನಕಿ ತಂದೆಯ ಶರ್ಟನ್ನು ತಂದು ಕೊಟ್ಟಳು.
ಶಂಕರಪ್ಪ ಗೌಡನ ಮನೆಗೆ ಬಂದ. ಗೌಡ ಬದಲಾಗಿದ್ದ. ಶಂಕರಪ್ಪ ವಿನಯದಿಂದಲೇ “ಗೌಡ್ರೇ ನಾನು ನಿಮ್ಮ ಹತ್ರ ಕೊಟ್ಟಿದ್ದ ಹಣ ಬೇಕಾಗಿತ್ತು” ಎಂದ. ಗೌಡ ಆಶ್ಚರ್ಯಗೊಂಡವನಂತೆ “ಯಾವ ಹಣ, ಯಾವಾಗ ಕೊಟ್ಟಿದ್ದಿ?” ಎಂದ.ಭಯಭೀತನಾದ ಶಂಕರಪ್ಪ “ನಾನು ನಗರಕ್ಕೆ ಹೋಗುವ ಮೊದಲು ಮರಳಿ ಬಂದು ಪಡೆಯುವುದಾಗಿ ಹೇಳಿ ಕೊಟ್ಟು ಹೋಗಿದ್ದೆನಲ್ಲ ಗೌಡ್ರೆ”ಎಂದ.ಸರಿ ನೀನು ಕೊಟ್ಟಿದ್ದಕ್ಕೆ ದಾಖಲೆ ಏನಿದೆ ಎಂದು ಕೇಳಿದ ಗೌಡ. ನಿಮ್ಮ ಮೇಲೆ ನನಗಿದ್ದ ನಂಬಿಕೆಯೇ ದಾಖಲೆಯಲ್ಲವೇ ಎಂದ ಶಂಕರಪ್ಪ. ನಡೇ ನಡೇ ಯಾರಲ್ಲೋ ಕೊಟ್ಡು ನನ್ನಲ್ಲಿ ಕೇಳುತ್ತಿದ್ದೀಯಾ ಎಂದು ಗದರಿದ ಗೌಡ. ಅಯ್ಯೋ ನಂಬಿ ಮೋಸ ಹೋದೆನಲ್ಲ ಎಂದು ಗೌಡನ ಮನೆಯಿಂದ ಹೊರಗೆ ಬಂದ ಶಂಕರಪ್ಪ.
ಹೆಂಡತಿಗೆ ನಡೆದದ್ದನ್ನೆಲ್ಲ ಹೇಳಿದ. ಸಂಜೆ ತನಗೆ ತನಗೆ ತಿಳಿದಿದ್ದ ನಾಲ್ಕೈದು ಮಂದಿಗೆ ವಿಷಯ ತಿಳಿಸಿ ಗೌಡನ ಮನೆಯಲ್ಲಿ ಹಿರಿಯರನ್ನು ಸೇರಿಸಿದ. ಗೌಡ ಮಾತ್ರ ಆತ ತನಗೆ ಹಣ ಕೊಟ್ಟಿಲ್ಲವೆಂದೇ ವಾದಿಸಿದ. ತಾನು ಹಣ ಕೊಟ್ಡಿದ್ದು ನಿಜವೆಂದು ಶಂಕರಪ್ಪ ಕಣ್ಣೀರು ಹಾಕಿದ. ಹಿರಿಯರಿಗು ಏನು ಮಾಡಬೇಕೆಂದು ತಿಳಿಯದಾಯಿತು. ಗಂಟೆಗಟ್ಟಲೆ ಮಾತನಾಡಿದರು ಸಮಸ್ಯೆ ಬಗೆಹರಿಯುವಂತೆ ಕಾಣಲಿಲ್ಲ.
ಹಿರಿಯನೊಬ್ಬ ಒಂದು ಉಪಾಯ ಮಾಡಿದ. “ಶಂಕರಪ್ಪ ನೀನು ಗೌಡರಿಗೆ ಐವತ್ತು ಸಾವಿರ ರೂಪಾಯಿ ಕೊಟ್ಟಿರಬಹುದು ಅಥವಾ ಕೊಡದೇ ಇರಬಹುದು. ಗೌಡರೇ ನೀವು ಪಡೆದಿರಬಹುದು ಅಥವಾ ಪಡೆಯದೇ ಇರಬಹುದು. ನೀವು ಒಪ್ಪುವುದಾದರೆ ನಿಮ್ಮ ಹಿತ್ತಲಿನಲ್ಲಿ ಶಂಕರಪ್ಪ ಹಾರಿಯಿಂದ ನೆಲಕ್ಕೆ ಹಾಕಲಿ ಒಂದು ವೇಳೆ ನೀರು ಚಿಮ್ಮಿದರೆ ಅವನು ಕೊಟ್ಟಿದ್ದಾನೆಂದು, ನೀರು ಚಿಮ್ಮದಿದ್ದರೆ ಅವನು ಕೊಟ್ಟಿಲ್ಲವೆಂದು ಅರ್ಥ” ಎಂದ. ಎಲ್ಲರೂ ಒಪ್ಪಿದರು. ಹಿತ್ತಲಲ್ಲಿ ಶಂಕರಪ್ಪ ಹಾರಿಯಿಂದ ಹಾಕಿದಾಗ ನೀರು ಚಿಮ್ಮಲಿಲ್ಲ. ಶಂಕರಪ್ಪ ಹತಾಶನಾದ. ಗೌಡ ಜೋರಾಗಿ ನಕ್ಕ. ಹಿರಿಯರಿಗು ಶಂಕರಪ್ಪ ಹಣ ಕೊಡದೇ ಇರಬಹುದೆಂಬ ಅನುಮಾನ ಮೂಡಿತು. ಮೌನ ಆವರಿಸಿತು. ದುಃಖಿತನಾದರು ಶಂಕರಪ್ಪ ಆತ್ಮಸ್ಥೈರ್ಯ ಕಳೆದುಕೊಳ್ಳಲಿಲ್ಲ. ತಕ್ಷಣ ಒಂದು ಉಪಾಯ ಮಾಡಿದ.
ನನ್ನನ್ನು ಕ್ಷಮಿಸಿ ನಾನು ಗೌಡರಿಗೆ ಕೊಟ್ಟಿದ್ದು ಐವತ್ತು ಸಾವಿರವಲ್ಲ ಬದಲಾಗಿ ಒಂದು ಲಕ್ಷ ರೂಪಾಯಿ. ನನ್ನ ಮಾತನ್ನು ಕೇಳಿ, ನನ್ನನ್ನು ನಂಬಿ ಎಂದು ಹಿರಿಯರ ಕಾಲು ಹಿಡಿದ.ಮರುಗಿದ ಹಿರಿಯರು ಮತ್ತೊಂದು ಅವಕಾಶ ಕಲ್ಪಿಸಿದರು. ಶಂಕರಪ್ಪ ಒಬ್ಬ ಮೂರ್ಖ ಎಂದು ಗೌಡನು ಒಪ್ಪಿದ. ಮತ್ತೊಮ್ಮೆ ಹಾರಿಯಿಂದ ನೆಲಕ್ಕೆ ಹಾಕಿದಾಗ ಅವನ ಅದೃಷ್ಟವೆಂಬಂತೆ ನೀರು ಚಿಮ್ಮಿತು. ಶಂಕರಪ್ಪನಿಗೆ ಹೋದ ಜೀವ ಮರಳಿ ಬಂದಂತಾಯಿತು. ಸತ್ಯ ಮತ್ತು ಪ್ರಾಮಾಣಿಕತೆಗೆ ಅಂತಿಮ ಜಯ ಎನ್ನುವುದು ಸಾಬೀತಾಯಿತು. ಗೌಡ ಬೆವರಿದ. ಹಿರಿಯರೆಲ್ಲರು ಆಶ್ಚರ್ಯಗೊಂಡರು. ನಂಬಿಕೆ ದ್ರೋಹಿ ಎಂದು ಛೀಮಾರಿ ಹಾಕಿದರು. ಮಾತಿನಂತೆ ಗೌಡನಿಗೆ ಒಂದು ಲಕ್ಷ ರೂಪಾಯಿ ಹಿಂದಿರುಗಿಸಲು ತಿಳಿಸಿದರು. ತಾನು ಸುಳ್ಳು ಹೇಳಿದ್ದಕ್ಕೆ ಕ್ಷಮಿಸಿ ಗೌಡನ ಅಹಂಕಾರ ಮುರಿಯುವುದಕ್ಕೆ ಹಾಗೆ ಮಾಡಿದೆ ನನಗೆ ಐವತ್ತು ಸಾವಿರ ರೂಪಾಯಿ ಮಾತ್ರ ನೀಡಿ ಎಂದು ಶಂಕರಪ್ಪ ಪ್ರಾಮಾಣಿಕತೆ ಮೆರೆದ. ತನ್ನ ತಪ್ಪಿನ ಅರಿವಾದ ಗೌಡ ಶಂಕರಪ್ಪನಲ್ಲಿ ಕ್ಷಮೆ ಕೇಳಿದ. ಹಣ ಪಡೆದ ಶಂಕರಪ್ಪ ಸಂತೋಷದಿಂದ ಮನೆಯತ್ತ ನಡೆದ.
ಮೃತ್ಯುಂಜಯ ಕಬ್ಬೂರ
8722378027
No comments:
Post a Comment